ದೇಶದಲ್ಲಿ ಕೃಷಿ ನವೋದ್ಯಮ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯ ಎರಡನೇ ಸ್ಥಾನ - ನಾರಾಯಣ ಸುರೇಶ್

27 Mar, 2025

 

ಬೆಂಗಳೂರು: ಕರ್ನಾಟಕ ರಾಜ್ಯ ದೇಶದಲ್ಲೇ ಕೃಷಿ ನವೋದ್ಯಮ ಅನುಷ್ಠಾನದಲ್ಲಿ ಎರಡನೇ ಸ್ಥಾನದಲ್ಲಿದ್ದು ಶೇಕಡಾ 30 ರಷ್ಟು ಜೈವಿಕ ಆರ್ಥಿಕತೆಯನ್ನು ಒದಗಿಸುತ್ತಿದೆ ಎಂದು ಬೆಂಗಳೂರಿನ ಜೈವಿಕ ವಿಜ್ಞಾನ ನವೋದ್ಯಮಗಳ ಸಂಘದ ಮುಖ್ಯಸ್ಥರಾದ ನಾರಾಯಣ ಸುರೇಶ್ ತಿಳಿಸಿದರು.

ಇಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಜಿಕೆವಿಕೆ ಆವರಣದಲ್ಲಿ ಆಯೋಜಿಸಿದ್ದ “ಭವಿಷ್ಯಕ್ಕಾಗಿ ಕೃಷಿ  ಉದ್ದಿಮೆಯಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯ” ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಪರಿಸ್ಥಿತಿಯಲ್ಲಿ ಹವಾಮಾನ ವೈಪರಿತ್ಯ ನಿರ್ವಹಣೆ ರೈತರಿಗೆ ಅತಿದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ನವೋದ್ಯಮಗಳು ನಷ್ಟದ ಪ್ರಮಾಣ ತಪ್ಪಿಸಿ ಹೆಚ್ಚಿನ ಆದಾಯ ಕಲ್ಪಿಸುವ ನಿಟ್ಟಿನಲ್ಲಿ ನೆರವಾಗಲಿವೆ, ಬದಲಾವಣೆಗೆ ತಕ್ಕಂತೆ ಕೃಷಿಯಲ್ಲಿ ಕೃತಕ ಬುದ್ಧಿಬತ್ತೆ, ಡ್ರೋನ್ ಅಳವಡಿಕೆ, ಆಧುನಿಕ ತಂತ್ರಜ್ಞಾನಗಳನ್ನು ಅಡವಳಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಕೃಷಿ ನವೋದ್ಯಮಗಳಿಂದ ಇನ್ನು ಹೆಚ್ಚು ತಾಂತ್ರಿಕತೆಗಳು ಹೊರಹೊಮ್ಮಿ ರೈತರನ್ನು ಸುಸ್ಥಿರ ಕೃಷಿಯೆಡೆ ಕೊಂಡೊಯ್ಯಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.

ವಿಸ್ತರಣಾ ನಿರ್ದೇಶಕರಾದ ಡಾ: ವೈ.ಎನ್. ಶಿವಲಿಂಗಯ್ಯ ಮಾತನಾಡಿ, ಯಾವುದೇ ಸಂಶೋಧನೆಗಳು / ತಳಿ / ತಾಂತ್ರಿಕತೆಗಳು ಶೇಕಡಾ 35ರಷ್ಟು ಮಾತ್ರ ರೈತರ ಮನೆ ಬಾಗಿಲುಗಳಿಗೆ ತಲುಪುತ್ತಿದೆ. ಮುಂದಿನ ದಿನಗಳಲ್ಲಿ ಆಧುನಿಕ ತಾಂತ್ರಿಕತೆಗಳು ನೇರವಾಗಿ ರೈತರಿಗೆ ಸಿಗುವಂತಾಗಲು ರೂಪುರೇಷಗಳನ್ನು ಸಿದ್ದಪಡಿಸುವುದು ಅತ್ಯಗತ್ಯ. ನವೋದ್ಯಮ ಯಶಸ್ವಿಯಾಗಲು ಮಾರುಕಟ್ಟೆಯ ಬಗ್ಗೆ ಅಧ್ಯಯನ, ಗ್ರಾಹಕರ ಅಗತ್ಯತೆ ಅರಿಯುವುದು ಅವಶ್ಯವಾಗಿದೆ. ಬೆಂಗಳೂರು ಸಿಲಿಕಾನ್ ಸಿಟಿಯಾಗಿ ಮಾತ್ರ ಉಳಿದಿಲ್ಲ, ಜೈವಿಕ ಹಾಗೂ ನವೋದ್ಯಮ ನಗರವಾಗಿಯೂ ಸಹ ರೂಪುಗೊಳ್ಳುತ್ತಿದೆ. ಕರ್ನಾಟಕ ರಾಜ್ಯವು ದೇಶದಲ್ಲಿಯೇ ಕೃಷಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಕೃಷಿ ನವೋದ್ಯಮಗಳಿಗೆ ಸಂಬಂಧಿಸಿದಂತೆ ನೀತಿ ನಿರೂಪಣೆಯಲ್ಲಿ ಮಾದರಿಯಾಗಿದೆ. ನವೋದ್ಯಮಗಳ ಬಗ್ಗೆ ಶಾಲಾ ಮತ್ತು ಕಾಲೇಜು ಮಟ್ಟದ ಪಠ್ಯದಲ್ಲಿ ಬೋಧಿಸಿ ಯುವಜನರಲ್ಲಿ ಆಸಕ್ತಿಯನ್ನು ಮೂಡಿಸಬೇಕು ಎಂದು ತಿಳಿಸಿದರು.

ಕೃಷಿ ವಿಭಾಗದ  ಡೀನ್ ಡಾ: ಎನ್. ಬಿ. ಪ್ರಕಾಶ್ ಮಾತನಾಡಿ, ಬದಲಾದ ಪರಿಸ್ಥಿತಿಯಲ್ಲಿ ರೈತ ಸ್ನೇಹಿ ತಂತ್ರಜ್ಞಾನಗಳ ಬಗ್ಗೆ ಹೆಚ್ಚು ಸಂಶೋಧನೆಗಳಾಗಬೇಕು. ಕೃಷಿ ನವೋದ್ಯಮದಲ್ಲಿ ರೋಬಟ್ ನಿರ್ವಹಣೆ, ಯಾಂತ್ರೀಕೃತ ಬೇಸಾಯ, ಮಣ್ಣು ಮತ್ತು ನೀರಿನ ನಿರ್ವಹಣೆ ಬಗ್ಗೆ ಹೆಚ್ಚು ಒತ್ತು ನೀಡಬೇಕು. ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯದ ಪಠ್ಯ ಚಟುವಟಿಕೆಗಳಲ್ಲಿ ನವೋದ್ಯಮಗಳನ್ನು ಗುರುತಿಸುವ, ಪ್ರೋತ್ಸಾಹಿಸುವ ಕೆಲಸ ಕೈಗೊಳ್ಳಲಾಗುವುದು ಎಂದÀು ತಿಳಿಸಿದರು.

ಕಾರ್ಯಾಗಾರದಲ್ಲಿ 250ಕ್ಕೂ ಹೆಚ್ಚು ಉತ್ಸಾಹಿ ನವೋದ್ಯಮಗಳು ಭಾಗವಹಿಸಿದ್ದರು.

Publisher: eSamudaay

Powered by